ಗ್ರೇಹಂ, ರಾಬರ್ಟ್

1735? - 1797? : ಸ್ಕಾಚ್ ಕವಿ ಮತ್ತು ರಾಜಕಾರಣಿ. ಸ್ಟರ್ಲಿಂಗ್‍ಷೀರಿನ ಗಾರ್ಟ್‍ಮೋರಿನಲ್ಲಿ, ನಿಕಲಸ್ ಗ್ರೇಹಂ ಮತ್ತು ಮಾರ್ಗರೀಟರ ಮಗನಾಗಿ ಹುಟ್ಟಿದ. ಗ್ಲಾಸ್ಗೋ ವಿಶ್ವವಿದ್ಯಾಲಯದಲ್ಲಿ ಉಚ್ಚ ಶಿಕ್ಷಣ ಪಡೆದು ತರುವಾಯ ಜಮೇಕಕ್ಕೆ ತೆರಳಿ ತೋಟದೊಡೆಯನಾಗಿ ಶ್ರೀಮಂತ ಜೀವನವನ್ನಾರಂಭಿಸಿದ. ಕೆಲಕಾಲ ಆಸ್ತಿನಿರ್ವಾಹಕನಾಗಿಯೂ ಕೆಲಸಮಾಡಿದ. 1784ರಲ್ಲಿ ಗ್ಲಾಸ್ಗೋ ವಿಶ್ವವಿದ್ಯಾಲಯದ ಅಧ್ಯಕ್ಷನಾಗಿ ಚುನಾಯಿತನಾದ.

	1794 ರಿಂದ 1796ರ ವರೆಗೆ ಸ್ಟರ್ಲಿಂಗ್‍ಷೀರಿನಿಂದ ಪಾರ್ಲಿಮೆಂಟಿಗೆ ಆಯ್ಕೆಯಾಗಿ ರಾಜಕೀಯದಲ್ಲಿ ವಿಶೇಷ ಆಸ್ಥೆ ವಹಿಸಿದ. ಈತ ಮಂಡಿಸಿದ ಪ್ರಜಾಧಿಕಾರ ಮಸೂದೆ 1832ರಲ್ಲಿ ಬರಲಿದ್ದ ಸುಧಾರಣಾಮಸೂದೆಗೆ ಮುನ್ಸೂಚನೆಯಂತಿದೆ. ಇದು ಈತನ ರಾಜಕೀಯ ದೂರದೃಷ್ಟಿಗೆ ನಿದರ್ಶನ ಈತ 1796ರಲ್ಲಿ ತನ್ನ ಹೆಸರನ್ನು ರಾಬರ್ಟ್ ಕನಿಂಗ್ಹಂ ಗ್ರೇಹಂ ಎಂಬುದಾಗಿ ಬದಲಾಯಿಸಿಕೊಂಡ. ಫ್ರೆಂಚ್ ಕ್ರಾಂತಿಯ ಆದರ್ಶತತ್ತ್ವಗಳ ಉಜ್ಜ್ವಲಪ್ರತಿಪಾದಕನಾಗಿದ್ದ. ಈತ ಬರೆದ ಭಾವಗೀತೆಗಳಲ್ಲಿ ಇಫ್ ಡೌಟಿ ಡೀಡ್ಸ್ ಮೈ ಲೇಡಿ ಪ್ಲೀಸ್-ತುಂಬ ಜನಪ್ರಿಯತೆಯನ್ನು ಗಳಿಸಿದುದಲ್ಲದೆ ಈತನ ಹೆಸರನ್ನೂ ಶಾಶ್ವತಗೊಳಿಸಿದೆ.	(ಎಂ.ಎಸ್.ವಿ.ಇ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ